ನಿರ್ಮಾಪಕ ರಾಮು ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ

ಬೆಂಗಳೂರು, 26 ಏಪ್ರಿಲ್ 2021
ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಲನಚಿತ್ರರಂಗದಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ರಾಮು ಅವರು, ಚಿತ್ರಗಳಿಗೆ ಕೋಟಿಗಟ್ಟಲೆ ಬಂಡವಾಳ ಹೂಡುವ ಮೂಲಕ ಕೋಟಿ ನಿರ್ಮಾಪಕ ಎಂಬ ಖ್ಯಾತಿ ಪಡೆದಿದ್ದರು.

ಲಾಕಪ್ ಡೆತ್, ಎಕೆ 47 ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು ಚಂದನವನವನ್ನು ಅದ್ದೂರಿಯಾಗಿ ಮೆರೆಸಿದ ನಿರ್ಮಾಪಕ ರಾಮು ಕೊರೊನಾಗೆ ಬಲಿಯಾದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಭರಸಿಡಿಲು ಬಡಿದಂತೆ ಬಂದೆರಗಿದೆ.

ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ನವರಾದ ರಾಮು, ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸಣ್ಣ ಸಣ್ಣ ಕೆಲಸಗಳನ್ನು ಮಾಡಿಕೊಂಡು ನಂತರ ವಿತರಕರಾಗಿ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಖ್ಯಾತ ನಟಿ ಮಾಲಾಶ್ರೀ ಅವರನ್ನು ಮದುವೆಯಾಗಿ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದ ಧೀಮಂತ ನಿರ್ಮಾಪಕ. ರಾಮು ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದಂತಾಗಿದೆ.

ರಾಮು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆಯ ನೋವವನ್ನು ಭರಿಸುವ ಶಕ್ತಿಯನ್ನು ಅವರ ಕುಟುಬ ವರ್ಗದವರಿಗೆ ಆ ಭಗವಂತನು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ತಮ್ಮ ಸಂತಾಪದಲ್ಲಿ ಪುರಾಣಿಕ್ ತಿಳಿಸಿದ್ದಾರೆ.