ಪತ್ರಿಕಾ ಹೇಳಿಕೆ 22-02-2020: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

12 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – 2020
ಫೆಬ್ರವರಿ 26 – ಮಾರ್ಚ್ 4, 2020

12 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಫೆ.26 ರಂದು ಬುಧವಾರ ಸಂಜೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಮುಕ್ತಾಯ ಸಮಾರಂಭ ಹಾಗೂ ಪ್ರಶಸ್ತಿಪ್ರದಾನ ಸಮಾರಂಭ ಮಾರ್ಚ್ 4ರಂದು ಬುಧವಾರ ಸಂಜೆ ನಡೆಯಲಿದೆ.

ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದು, ಹೆಸರಾಂತ ನಟ ಶ್ರೀ ಯಶ್, ಖ್ಯಾತ ನಟಿ ಶ್ರೀಮತಿ ಜಯಪ್ರದಾ, ಬಾಲಿವುಡ್‍ನ ಹೆಸರಾಂತ ನಿರ್ಮಾಪಕ ಶ್ರೀ ಬೋನಿಕಪೂರ್ ಹಾಗೂ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮುಖ್ಯ ಅತಿಥಿಗಳಾಗಿರುತ್ತಾರೆ.

ಇರಾನಿ ಚಲನಚಿತ್ರ ನಿರ್ದೇಶಕ ಶಾಹಿದ್ ಅಹಮಡೇಲು ನಿರ್ದೇಶನದ “ಸಿನಿಮಾ ಖಾರ್” (ಸಿನಿಮಾ ಡಾಂಕಿ) ಚಿತ್ರವನ್ನು ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲಾಗುವುದು.

ಮುಕ್ತಾಯ ಸಮಾರಂಭ ಮಾ. 4 ರಂದು ವಿಧಾನಸೌಧದ ಬ್ಯಾಂಕ್ವೆಟ್‍ಹಾಲ್‍ನಲ್ಲಿ ನಡೆಯಲಿದ್ದು, ಏಶಿಯಾ, ಭಾರತೀಯ ಹಾಗೂ ಕನ್ನಡದ ಅತ್ಯುತ್ತಮ ಚಿತ್ರಗಳಿಗೆ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಜುಭಾಯ್‍ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮುಕ್ತಾಯ ಚಲನಚಿತ್ರವಾಗಿ ಇಸ್ರೇಲಿನ ಇವೆಗಿನಿ ರುಮಾನ್ ನಿರ್ದೇಶನದ “ಗೋಲ್ಡನ್ ವಾಯ್ಸಸ್” ಚಲನಚಿತ್ರ ಪ್ರದರ್ಶಿಸಲಾಗುವುದು.

ಪ್ರತಿನಿಧಿಗಳಿಗೆ ಫೆ.27 ರಿಂದ ಕೆಳಕಂಡ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯಲಿದೆ.
ಪಿ.ವಿ.ಆರ್ ಸಿನಿಮಾಸ್ ಓರಾಯನ್ ಮಾಲ್ ಇಲ್ಲಿನ 11 ಪರದೆಗಳಲ್ಲಿ
ನವರಂಗ್ ಚಿತ್ರಮಂದಿರ, ರಾಜಾಜಿನಗರ
ಡಾ.ರಾಜ್ ಭವನ, ಕನ್ನಡ ಕಲಾವಿದರ ಸಂಘ, ಚಾಮರಾಜಪೇಟೆ
ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ ಎರಡನೇ ಹಂತ

ಈ ಚಿತ್ರೋತ್ಸವದಲ್ಲಿ 60 ದೇಶಗಳ 225 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಚಿತ್ರೋತ್ಸವದ ಚಿತ್ರಗಳ ಪ್ರಮುಖ ಅಂಶಗಳು
1 ಸ್ಪರ್ಧಾ ವಿಭಾಗ:
ಏಶಿಯನ್ ಸ್ಪರ್ಧಾ ವಿಭಾಗ
ಭಾರತೀಯ ಚಿತ್ರಗಳ ವಿಭಾಗ
ಕನ್ನಡ ಸ್ವರ್ಧಾ ವಿಭಾಗ
ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ವಿಭಾಗ

2 ಸಮಕಾಲೀನ ವಿಶ್ವ ಸಿನಿಮಾ

3. ದೇಶ ಕೇಂದ್ರಿತ: ಜರ್ಮನಿ, ಫಿಲಿಫೈನ್ಸ್, ಆಸ್ಟ್ರೇಲಿಯಾ ರಾಷ್ಟ್ರಗಳ ಚಿತ್ರಗಳು

4 . ಪುನರವಲೋಕನ ವಿಭಾಗ: ರಷಿಯಾದ ನಿರ್ದೇಶಕ ಆಂದ್ರೆ ತಾರ್ಕೋವ್‍ಸ್ಕಿ
ಬಹುಭಾಷಾ ನಟ ಅನಂತನಾಗ್ ಚಿತ್ರಗಳು

5 . ಕೇಳರಿಯದ ಅದ್ಭುತ ಭಾರತ ವಿಭಾಗ: ಹೆಚ್ಚು ಪ್ರಚುರವಿಲ್ಲದ ಭಾಷೆಗಳ ಚಿತ್ರಗಳು

ಬರ್ಲಿನ್, ಕಾನ್, ವೆನಿಸ್, ಟೊರೆಂಟೊ, ಗೋವಾ, ಮುಂಬೈ ಮತ್ತು ಕೇರಳ ಅಂತಾರಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ವಿಶ್ವ ಸಿನಿಮಾಗಳು ಈ ಬಾರಿ ಬೆಂಗಳೂರು ಚಿತ್ರೋತ್ಸವದಲ್ಲಿವೆ.

ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ (FIPRESCI) ಪ್ರಶಸ್ತಿವಿಜೇತ ಹಾಗೂ ಏಷ್ಯಾ ಚಲನಚಿತ್ರ ಪ್ರಚಾರ ಜಾಲ (NETPAC) ಪ್ರಶಸ್ತಿವಿಜೇತ ಆಯ್ದ ಚಿತ್ರಗಳ ಪ್ರದರ್ಶನ ಈ ಉತ್ಸವದ ವಿಶೇಷತೆಗಳಲ್ಲಿ ಸೇರಿದೆ.

“ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ” ಇದು ಚಿತ್ರೋತ್ಸವದ ಮುಖ್ಯವಸ್ತುವಾಗಿದ್ದು, ಇದರಲ್ಲಿ ಸಂಗೀತಗಾರರ ಆತ್ಮಕಥೆ ಆಧಾರಿತ ಚಿತ್ರಗಳು, ಸಂಗೀತ ಪ್ರಧಾನ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಆತ್ಮಚರಿತ್ರೆ ಆಧರಿಸಿದ ಬಯೋಪಿಕ್‍ಗಳು ಈ ಸಲದ ಚಿತ್ರೋತ್ಸವದಲ್ಲಿ ವಿಶೇಷ. ರಷ್ಯಾದ ನಿರ್ದೇಶಕ ಆಂದ್ರೆ ತಾರ್ಕೋವೆಸ್ಕಿ, ಗಾಯಕಿ ಹೆಲನ್ ರೆಡ್ಡಿ, ಕನ್ನಡದ ಜನಪ್ರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ. ಡಾ.ಚಂದ್ರಶೇಖರ ಕಂಬಾರ. ಹಿಂದೂಸ್ತಾನಿ ಸಂಗೀತ ಸಾಮ್ರಾಟ ಡಾ.ರಾಜೀವ ತಾರಾನಾಥ್, ಶ್ರೀಮತಿ ಲಲಿತಾರಾವ್ ಮತ್ತು ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರುಗಳ ಸಾಕ್ಷ್ಯಚಿತ್ರಗಳಿರುತ್ತವೆ.

ಚಲನಚಿತ್ರ ಕಾರ್ಯಾಗಾರ, ವಿಚಾರ ಸಂಕಿರಣ ಹಾಗೂ ಮಾಸ್ಟರ್ ಕ್ಲಾಸ್ ಗಳು ಪಿವಿಆರ್‍ನ ಒಂದು ಚಿತ್ರಮಂದಿರದಲ್ಲಿ ನಡೆಯಲಿದೆ. ಚಿತ್ರೋತ್ಸವ ಹಾಗೂ ಇನ್ನಿತರ ಎಲ್ಲ ವಿವರಗಳನ್ನು ಚಲನಚಿತ್ರ ಅಕಾಡೆಮಿಯ ಅಧಿಕೃತ ಜಾಲತಾಣ biffes.in ದಲ್ಲಿ ನೋಡಬಹುದು.

ಚಿತ್ರೋತ್ಸವದಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಾಸ್ತಾನ, ದೆಹಲಿ, ತೆಲಂಗಾಣ, ಕೇರಳ, ಹಾಗೂ ತಮಿಳುನಾಡುಗಳಿಂದ ಚಲನಚಿತ್ರ ನಿರ್ಮಾಪಕರು, ಚಲನಚಿತ್ರ ಉತ್ಸವ ಸಂಘಟಕರು, ಪತ್ರಕರ್ತರು, ಚಲನಚಿತ್ರ ವಿಮರ್ಶಕರು ಪ್ರತಿನಿಧಿಗಳಾಗಿ ಆಗಮಿಸುತ್ತಿದ್ದಾರೆ. ಅಲ್ಲದೆ ವಿದೇಶಗಳಿಂದ ಕೂಡ ಸಿನಿಮಾ ನಿರ್ದೇಶಕರು, ತಂತ್ರಜ್ಞರು ಆಗಮಿಸುತ್ತಿದ್ದಾರೆ.

ಬುಕ್ ಮೈ ಶೋ ಜಾಲತಾಣದ ಮೂಲಕ ಪ್ರತಿನಿಧಿಗಳ ನೋಂದಣಿ ಫೆಬ್ರವರಿ 24 ರ ವರೆಗೆ ಇರುತ್ತದೆ. ಫೆ.26 ರ ವರೆಗೆ ನಂದಿನಿ ಲೇಔಟ್‍ನಲ್ಲಿರುವ ಚಲನಚಿತ್ರೋತ್ಸವದ ಕಚೇರಿ, ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ, ವರ್ತುಲ ರಸ್ತೆ, ನಂದಿನಿ ಬಡಾವಣೆ ಬೆಂಗಳೂರು ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪ್ರತಿನಿಧಿ ಶುಲ್ಕ ಸಾರ್ವಜನಿಕರಿಗೆ ರೂ.800, ವಿದ್ಯಾರ್ಥಿಗಳಿಗೆ ಹಾಗೂ ಫಿಲಂ ಸೊಸೈಟಿ ಸದಸ್ಯರಿಗೆ, ಹಾಗೂ ಕರ್ನಾಟಕ ವಾಣಿಜ್ಯ ಮಂಡಳಿ ಸದಸ್ಯರಿಗೆ ರೂ.400.