ಅಧ್ಯಕ್ಷರ ವ್ಯಕ್ತಿ ಪರಿಚಯ

ಎಸ್. ವಿ. ರಾಜೇಂದ್ರ ಸಿಂಗ್ ಬಾಬು

ಸಿನಿಮಾ ಮಾಡುವಲ್ಲಿ ಸಂಪ್ರದಾಯದ ಸಂಕೋಲೆಯಿಂದ ಹೊರಬಂದು, ಹೊಸತನದ ಪ್ರಯೋಗ ಮಾಡಿ ಯಶ ಕಂಡ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಚಿತ್ರರಂಗದ ಹಿನ್ನೆಲೆಯಿಂದ ಮೂಡಿಬಂದವರು ಅವರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ನಂತರ ಸಿನಿಮಾದ ಹಾದಿ ತುಳಿದು ‘ಮಹಾತ್ಮಾ ಪಿಕ್ಚರ್ಸ್’ ಸಂಸ್ಥೆಯನ್ನು ಕಟ್ಟಿ ಅನೇಕ ವಿಖ್ಯಾತ ಕನ್ನಡ ಸಿನೆಮಾಗಳನ್ನು ಬೆಳ್ಳಿ ತೆರೆಗಿತ್ತ ಶ್ರೀ ಶಂಕರ ಸಿಂಗ್ ಹಾಗೂ ಖ್ಯಾತ ಅಭಿನೇತ್ರಿ ಪ್ರತಿಮಾದೇವಿ ಸಿಂಗ್ ಅವರ ಮಗನಾದ ರಾಜೇಂದ್ರ ಸಿಂಗ್ ಬಾಬು ಸಿನಿಮಾವನ್ನು ಅಕ್ಕರೆಯಿಂದ ಅಪ್ಪಿಕೊಂಡು ಬೆಳೆದವರು.

ಕಲಾ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ ಆಳವಾಗಿ ಸಿನಿಮಾ ಅಧ್ಯಯನದಲ್ಲಿ ತೊಡಗಿಕೊಂಡು ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಎಲ್ಲ ವಿಭಾಗಗಳಲ್ಲೂ ದುಡಿದು ಅನುಭವ ಘನೀಕರಿಸಿಕೊಂಡ ಬಾಬು ಅವರ ಪರಿಣಿತಿ ಅವರ ವಯೋಮಾನಕ್ಕೆ ಮೀರಿದ್ದಾಗಿತ್ತು.

1973-74 ರಲ್ಲಿ ಹಾಲಿವುಡ್‍ನ ಚಿತ್ರತಂಡ “ ಮೈಟಿ ಹಿಮಾಲಯನ್ ಮ್ಯಾನ್” ಚಿತ್ರದ ಚಿತ್ರೀಕರಣಕ್ಕೆ ರಾಜ್ಯಕ್ಕೆ ಭೇಟಿಯಿತ್ತಾಗ ಆ ಯೂನಿಟ್‍ನೊಡನೆ ಕೆಲಸ ಮಾಡಿದ ಬಾಬು ತಮ್ಮ ಜ್ಞಾನದಿಂದ, ಆಧುನಿಕ ಸಿನಿಮಾ ತಂತ್ರಜ್ಞಾನದ ಕುರಿತು ತಮಗಿದ್ದ ತಿಳುವಳಿಕೆಯಿಂದ ಹಾಲಿವುಡ್‍ನ ತಂತ್ರಜ್ಞದ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ.

‘ನಾಗರಹೊಳೆ’ ಸಿನಿಮಾದೊಂದಿಗೆ ಚಿತ್ರನಿರ್ದೇಶಕನಾಗಿ ಸಿನಿಲೋಕ ಪ್ರವೇಶಿಸಿದ ಬಾಬು ತನ್ನ ಮೊದಲ ಪ್ರಯತ್ನದಲ್ಲೆ ಅದ್ಭುತ ಯಶಕಂಡು ಸಿನಿಲೋಕದಲ್ಲಿ ಸಂಚಲನ ಮಾಡಿಸಿದರು.

ಆಹ್ವಾನದ ಮೇರೆಗೆ ರಷ್ಯಾ, ಅಮೆರಿಕಾ, ಫ್ರಾನ್ಸ್, ಆಸ್ಟ್ರೇಲಿಯಾ, ಸಿಂಗಾಪುರ, ಫಿಜಿ ದ್ವೀಪಗಳಿಗೆ ಭೇಟಿಯಿತ್ತು ಅಲ್ಲಿ ತಮ್ಮ ಸಿನಿಮಾ ಜ್ಞಾನ ಪ್ರದರ್ಶಿಸಿದ ರಾಜೇಂದ್ರ ಸಿಂಗ್ ಬಾಬು ಎಲ್ಲೆಡೆ ತಂತ್ರಜ್ಞರಿಂದ ಪ್ರಶಂಸೆಗೊಳಗಾದವರು.

ಮೈಸೂರು ವಿಶ್ವವಿದ್ಯಾನಿಲಯವು ಸಿನಿಮಾ ಅಧ್ಯಯನ ಕೋರ್ಸ್‍ಗಳನ್ನು ಆರಂಭಿಸಲು ನೇಮಿಸಿದ ಸಮಿತಿಯ ಅಧ್ಯಕ್ಷರಾದದ್ದು ರಾಜೇಂದ್ರ ಸಿಂಗ್ ಬಾಬು ಅವರ ಹೆಗ್ಗಳಿಕೆ.

ಎನ್‍ಎಫ್‍ಡಿಸಿ ಬೆಂಗಳೂರು ಪ್ರಾಂತ್ಯದ ಸ್ಕ್ರಿಪ್ಟ್ ಪ್ಯಾನೆಲ್ ಸದಸ್ಯತ್ವ, ಬೆಂಗಳೂರಿನಲ್ಲಿ 1992 ರಲ್ಲಿ ನಡೆದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸರ್ಕಾರದದಿಂದ ಪಡೆದ ಸದಸ್ಯತ್ವ, ಸರ್ಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋಸ್‍ನ ನಿರ್ದೇಶಕತ್ವ, ಕನ್ನಡ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯತ್ವ, ಬೆಂಗಳೂರು ವಿಶ್ವವಿದ್ಯಾನಿಲಯದ ಚಿತ್ರ ಅಧ್ಯಯನ ಸಮಿತಿಯ ಸದಸ್ಯತ್ವ ಮೊದಲಾದವು ಅವರನ್ನರಸಿ ಬಂದ ಗೌರವಗಳು.ಅವರು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಸತತ ನಾಲ್ಕನೇ ಅವಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕ ಸರ್ಕಾರವು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಸಂಘಟನೆಯ ಕುರಿತು ಅಧ್ಯಯನ ಮಾಡಲು ಫ್ರಾನ್ಸ್ ನ ‘ಕಾನ್ಸ್’ಗೆ ಕಳುಹಿಸಿದ ನಿಯೋಗದ ಸದಸ್ಯರಾಗಿದ್ದರು.

ನಾಗರಹೊಳೆ, ಅಂತ, ಸಿಂಹದ ಮರಿ ಸೈನ್ಯ, ಬಂಧನ, ಮುತ್ತಿನ ಹಾರ, ಹೂವು ಹಣ್ಣು, ಮಹಾಕ್ಷತ್ರಿಯ, ಮುಂಗಾರಿನ ಮಿಂಚು, ದೋಣಿ ಸಾಗಲಿ, ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀ ರಾಜೇಂದ್ರ ಸಿಂಗ್ ಬಾಬು ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರಾಜ್ಯದಲ್ಲಿ ಚಿತ್ರನಗರಿಯನ್ನು ನಿರ್ಮಿಸಲು ಒಂದು ನೀಲನಕ್ಷೆ ಸಿದ್ಧಪಡಿಸಿ ಕೊಡುವಂತೆ ಕರ್ನಾಟಕ ಸರ್ಕಾರವು ರಾಜೇಂದ್ರ ಸಿಂಗ್ ಬಾಬು ಅವರನ್ನು ಕೋರಿತ್ತು. ಶ್ರೀ ಬಾಬು ಅವರು ಸಿದ್ಧಪಡಿಸಿಕೊಟ್ಟ ನೀಲನಕ್ಷೆಯ ಆಧಾರದ ಮೇಲೆ ಈಗ ಚಿತ್ರನಗರಿಯ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಪ್ರಸ್ತುತ ರಾಜೇಂದ್ರಸಿಂಗ್ ಬಾಬು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.